ಭಸ್ಮಾಸುರ -
	ಒಬ್ಬ ರಾಕ್ಷಸ. ಶಿವನನ್ನು ಕುರಿತು ತಪಸ್ಸು ಮಾಡಿ ತನ್ನ ಕಯ್ಯ ಆರಮೇಲೆ ಮಡಗಲು ಅವರು ಸುಡಲಿ ಎಂಬ ವರ ಪಡೆದು ಲೋಕವನ್ನು ಬಾಧಿಸತೊಡಗಿದ. ವರದಿಂದ ಸೊಕ್ಕಿದ ಈತ ಶಿವನ ಮಂಡೆಯ ಮೇಲೆಯೆ ಕೈಯ್ಯನಿರಿಸಲು ಬಂದಾಗ ವರವ ಕೊಟ್ಟವನ ಕೊಲ್ಲಬಾರದು ನೀ ಕೊಂದು ಬಾ ಹರಿಯ ನೆಂದು ಕಳುಹಿದ. ಆಗ ವಿಷ್ಣು ಮೋಹಿನಿ ರೂಪ ಧರಿಸಿ ಭಸ್ಮಾಸುರನ ಬಳಿ ಬಂದಾಗ, ಅವನು ಆ ಚೆಲುವಿಗೆ ಮನಸೋತು ನೀನು ನನ್ನ ಹೆಂಡತಿಯಾದರೆ ನಿನ್ನ ಸುಡಲೊಲ್ಲೆ ಎನ್ನುತ್ತಾನೆ. ಆಗ ಮೋಹಿನಿ ರೂಪ ಧರಿಸಿದ್ದ ವಿಷ್ಣು, ಒಪ್ಪಿ ನಾ ಕುಣಿದ ಹಾಗೆ ನೀ ಕುಣಿದರೆ ನಿನ್ನ ಹೆಂಡತಿಯಾಗುತ್ತೇನೆ ಎನ್ನುತ್ತಾನೆ. ಇದಕ್ಕೆ ಒಪ್ಪಿದ ಭಸ್ಮಾಸುರ ಮೋಹಿನಿಯ ಕುಣಿತವನ್ನು ಅನುಸರಿಸಿ ಕುಣಿಯತೊಡಗಿದ.  ವಿಷ್ಣು ತನ್ನ ಮಂಡೆಯ ಮೇಲೆ ಕೈಯ್ಯನ್ನಿಟ್ಟು ಕುಣಿದಾಗ, ತಾನೂ ಹಾಗೆ ಮಾಡಲು ಹೋಗಿ ಸುಟ್ಟು ಬೂದಿಯಾದ. ಅನಂತರ ವಿಷ್ಣು ಶಿವನ ಬಳಿಗೆ ಹೋಗಿ ಭಸ್ಮಾಸುರ ಭಸ್ಮವಾದ ಎಂದು ಹೇಳಿದಾಗ ಶಿವ ಎದ್ದು ಬಂದು ಸ್ತ್ರೀರೂಪಿಯಾದ ವಿಷ್ಣುವನ್ನು ಆಲಂಗಿಸಿಕೊಂಡಾಗ ಕಾಪಾಲಿ ಮತದ ಭೈರವ ಹುಟ್ಟಿದ ಎನ್ನಲಾಗಿದೆ.

	ಈ ಉಲ್ಲೇಖ ಬಸವಲಿಂಗನ ಬಸವೇಶ್ವರ ಪುರಾಣದ ಕಥಾಸಾಗರ, ಶಿವಲೀಲಾಮೃತ, ತೋಂಟದ ಸಿದ್ದೇಶ್ವರ ಪುರಾಣ, ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣಗಳಲ್ಲಿ ಬಂದಿದೆ						   
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ